Tuesday, December 18, 2007

ಮದ್ದೂರ್ ವಡೆ

ಮೈಸೂರಿನಲ್ಲಿ ಅಜ್ಜನ ತಿಥಿ ಮುಗುಸಿಕೊಂಡು ಭಾನುವಾರ ಸಂಜೆನೇ ಬೆಂಗಳೂರಿಗೆ ಹೊರಡಬೆಕಿತ್ತು, ಆದ್ರೆ ಭಾನುವಾರಾ ಸಂಜೆ ರೈಲಿನಲ್ಲಿ ಜನ ಕಿಕ್ಕಿರಿದು ತುಂಬಿರ್ತಾರದ್ರಿಂದ ಸೋಮವಾರ ಬೆಳೆಗ್ಗೆ ಹೊರಟೆ. ಮೈಸೂರಿನಿಂದ ಬೆಂಗಳೂರಿಗೆ ಮೊದಲ ರೈಲು ಬೆಳಿಗ್ಗೆ ೬.೦೦ ಗಂಟೆಗೆ ಇದ್ರೂ ಕಾಲೆಜಿಗೆ ಸರಿಯಾಗಿ ಹೊಗಿ ಏನು ಸಾಧಿಸಬೆಕಾಗಿದೆಂತ, ೭.೦೦ ಗಂಟೆ ರೈಲಿಗೆ ಬಂದೆ. ವಿಧಿಯ ವಿಪರ್ಯಸ ಅನ್ಸುತ್ತೆ ೭.೦೦ ಗಂಟೆ ರೈಲ್ನಲ್ಲೆನು ಕಮ್ಮಿ ಜನ ಎನು ಇರಲಿಲ್ಲ, ಈಕಡೆ ಇಂದ ಆಕಡೆ, ಆಕಡೆ ಇಂದ ಈಕಡೆ ಮೂರ್ ನಾಲ್ಕು ಬೊಗಿ ಉದ್ದುಕ್ಕೆ ಒಡಾಡಿದ್ ಮೇಲೆ ಒಂದು ಕಡೆ ಮೂರ್ ಜನ ಕೂರೊ ಸೀಟ್ ನಲ್ಲಿ ನಾಲ್ಕ್ ಜನ ಕೂತಿದ್ರೂ ಐದ್ನೆವ್ನಾಗಿ ಅಡ್ಜಸ್ಟ್ ಮಾಡ್ಕೊಂಡು ಕೂತೆ. ರೈಲು ೭.೧೦ ಕ್ಕೆ ಮೈಸೂರ್ನಿಂದ ಹೊರಟಿತು, ನಿದ್ದೆ ಜೋರಾಗಿ ಬರ್ತಿದ್ರೂ ಸ್ಥಳ ಮಹಾತ್ಮೆ ಇಂದ ಕಣ್ಮುಚ್ಚಲಾಗಲಿಲ್ಲ. ನಿದ್ದೆ ಮಾಡೊ ಪ್ರಯತ್ನ ತುಂಬಾ ಹೊತ್ತು ನಾಡೀತು, ಆದ್ರೆ ಇನ್ನೆನು ಕಣ್ಣು ಮುಚ್ಚಿದೆ ಅನ್ನೊದ್ರಲ್ಲಿ ಎಡಗಡೇವ್ರೊ ಬಲ್ಗಡೆವ್ರೊ ಮೈಮೆಲೆ ಬೀಳ್ತಿದ್ರು, ಇದು ಆಗದೆ ಇರೊ ಕೆಲಸಾಂತ ಬ್ಯಾಗಿನಲ್ಲಿದ್ದ ಒಂದು ಪುಸ್ತಕ ಕೈಗೆತ್ತ್ಕೊಂಡೆ. ಒಂದು ಕತೆ ಓದೊಕ್ಕೆ ಶುರು ಮಾಡಿದೆ, ನನ್ನ ಕತೆ ಮುಂದಕ್ಕೆ ಹೊದಂತೆ ರೈಲು ಕೂಡ ಮರ, ಗಿಡ, ಹೊಲ, ಗದ್ದೆ, ಕಟ್ಟಡ, ಸೇತುವೆ, ಇದನೆಲ್ಲ ಹಿಂದಕ್ಕೆ ಹಾಕಿ ಮುಂದಕ್ಕೆ ಹೊಗ್ತ ಇತ್ತು, ಸುಮಾರು ೮.೩೦ ಕ್ಕೆ ರೈಲು ಮಂಡ್ಯ ತಲುಪ್ತು, ಹೊಟ್ಟೆನೂ ಹಶಿಯೊಕ್ಕೆ ಶುರುವಾಯ್ತು. ಬೆಳಿಗ್ಗೆ ಮನೆಯಿಂದ ಹೊರಟಾಗ ಬರಿ ಒಂದು ಲೊಟ ಕಾಫಿ ಕುಡ್ದಿದ್ದು ಅಷ್ಟೆ, ಅದಾದ್ ಮೆಲೆ ಎನು ಹೊಟ್ಟೆಗೆ ಬಿದ್ದಿರ್ಲಿಲ್ಲ.

ರೈಲು ಮಂಡ್ಯದಿಂದ ಮುಂದಕ್ಕೆ ಹೊರ್ಟಿದ್ದೆ ತಡ ರೈಲಿನೊಳಗೆ ಮದ್ದೂರ್ ವಡೆ, ಬಿಸಿ ಬಿಸಿ ಮದ್ದೂರ್ ವಡೆ, ಮಸಾಲೆ ಮದ್ದೂರ್ ವಡೆ, ಫ್ರೆಶ್ ಮದ್ದೂರ್ ವಡೆ, ಕಾಫಿ, ಟಿ ಯಾರಿಗೆ ಕಾಫಿ ಟಿ, ಹೀಗೆ ಮದ್ದೂರ್ ವಡೆ ಮತ್ತು ಕಾಫಿ ಟಿ ಮಾರಾಟ ಮಾಡುವವರ ಓಡಾಟ ಬಿರುಸು ಗೊಂಡಿತು. ಒಮ್ಮೆ ಮದ್ದೂರ್ ವಡೆ ಘಮ ಮೂಗಿಗೆ ಬಡಿದಿದ್ದೆ ತಡ ಅದನ್ನು ತಿನ್ನೊ ಚಪಲ ಶುರುವಾಯ್ತು. ಜೀಬಿನಲ್ಲಿ ೨೦ ರುಪಾಯಿ ಗಳಿದ್ದವು ಒಂದು ಮದ್ದೂರ್ ವಡೆ ಗೆ ೪ ರುಪಾಯಿ, ಇಲ್ಲಿ ಮದ್ದೂರ್ ವಡೆ ತಿಂದು ಕಾಫಿ ಕುಡೀಲೊ ಅಥವ ಕಾಲೆಜಿಗೆ ಹೊಗಿ ಕ್ಯಾಂಟೀನಿ ನಲ್ಲಿ ತಿಂಡಿ ತಿನ್ನಲೊ ಎಂಬ ದ್ವಂದ್ವ?, ಸ್ವಲ್ಪ ಸಮಯ ಅದನ್ನೆ ಯೊಚಿಸುತ್ತಾ, ಅಕ್ಕ ಪಕ್ಕ ತಿನ್ತಿರೊರ್ಮೆಲೆ, ಮದ್ದೂರ್ ವಡೆನ ಮಾರ್ತಿರೊರ್ ಮೇಲೆ ಕಣ್ಣು ಹಾಯ್ಸ್ತ ಕೂತೆ. ಈ ಮದ್ದೂರ್ ವಡೆ ಎಲ್ಲಿ ಮಾಡಿರ್ತಾರೊ, ಹೇಗೆ ಮಾಡಿರ್ತಾರೊ, ಯೆಂಬ ಪ್ರಶ್ನೆಗಳು ಮನಸ್ಸಿನಲ್ಲಿ ಬರ್ತಾ ಇದ್ರುವೆ ಅದರ ರುಚಿಯ ನೆನಪು ಈ ಪ್ರಶ್ನೆ ಗಳಿಗೆಲ್ಲ ಸಮರ್ಥಕ ವಾದ ಉತ್ತರ ನೀಡ್ತಾ ಇತ್ತು. ಹೀಗೆ ಮದ್ದೂರ್ ವಡೆ ತಿನ್ನಲೊ ಬೆಡವೊ ಎಂದು ಚಿಂತಿಸುತ್ತಿರುವಾಗ ಬೆನ್ನ ಹಿಂದಿನಿಂದ ಮದ್ದೂರ್ ವಡೆ, ಮದ್ದೂರ್ ವಡೆ ಯೆಂಬ ರಭಸದಲ್ಲಿರೊ ಕೂಗೊಂದು ಹತ್ತಿರವಾದಂತೆ ಎತ್ತರವಾಗಿ ಕೆಳ ತೊಡಗಿತು, ಸರಿ ಈ ಬಾರಿ ತಿನ್ನುವ ನಿರ್ಧಾರ ಮಾಡಿ ಅವನು ನಾನು ಕೂತ ಸಾಲಿನಲ್ಲಿ ಹಾದು ಹೊಗುವಾಗ ಮದ್ದೂರ್ ವಡೆಎಂದು ಕೂಗು ಹಾಕಿದೆ ಅವನ ಕಿವಿಗೆ ನನ್ನ ಕೂಗು ಕೇಳಿ, ತನ್ನ ಮದ್ದೂರ್ ವಡೆ ಬಕೀಟನ್ನು ಕೆಳಕ್ಕಿಳಿಸಿ ಹಿಂದೆ ತಿರುಗಿ ಏಷ್ಟು ಬೇಕೆಂದ, ಆ ಕ್ಷಣದಲ್ಲೆ ಅವನ ಮುಖ ಮೊದಲ ಬಾರಿಗೆ ಕಂಡದ್ದು, ತಕ್ಶಣವೆ ನನ್ನ ಮನಸಿಗೆ ಈ ಮುಖ ನನಗೆ ಪರಿಚಯ ಇಧ್ಧಾಗಿದೆ, ಬಹಳ ಚೆನ್ನಗಿಯೆ ಗೊತ್ತಿರೊತರ ಇದೆ ಎಂದುಕೊಳ್ಳುತಿರುವಾಗ, ಓ ಇದು ಸುಧಾಕರ ನಲ್ಲವೆ ಯೆಂಬ ನೆನಪಾಯಿತು. ನಾನು ಆತನನ್ನು ವೀಕ್ಷಿಸುತ್ತಲೆ ಇದ್ದೆ ಅವನು ತನ್ನ ನೆನೆಪಿನಾಳಕ್ಕಿಳಿದು ಏನೊ ಹುಡುಕಿತಂದವನಂತೆ ಒಮ್ಮೆಲೆ ನಕ್ಕಾಗ ನನಗೆ ಖಾತ್ರಿ ಯಾಯಿತು ಇದು ಸುಧಾಕರನೇ ಎಂದು. ನನಗೆ ಆಶ್ಚರ್ಯ ಆತಂಕ ಒಮ್ಮೆಲೆ ಆಯಿತು, ನನ್ನ ಮುಖದಲ್ಲೇಳುತಿದ್ದ ಪ್ರಶ್ನೆಗಳನ್ನರಿತು ಹಿಂದೆ ಬಾ ಎಂಬ ಸನ್ನೆ ಮಾಡಿದ, ನಾನು ಎದ್ದು ಅವನ ಹಿಂಬಾಲಿಸಿದೆ, ಬಾಗಿಲ ಬಳಿ ಹೊಗಿ ತನ್ನ ಮದ್ದೂರ್ ವಡೆ ಬಕೀಟನ್ನು ಕೆಳಗಿಟ್ಟು ನಿಂತ.

ಸುಧಾಕರ ನಾನ್ನ ಬಾಲ್ಯದ ಮಿತ್ರ ಹಾಗು ಸಹಪಾಟಿ, ಒಂದರಿಂದ ಏಳನೆ ತರಗತಿ ವರಗೆ ಜೊತೆಯಲ್ಲೆ ಓದಿದ್ದು. ಮೊಜಿನ ಸಂಗತಿಯಂದರೆ ಅವನು ನಾಲ್ಕನೇ ತರಗತಿಯ ವರೆಗೆ ಜಡೆ ಹಾಕಿಕೊಂಡು ಶಾಲೆಗೆ ಬರುತಿದ್ದ, ಹುಡುಗರೆಲ್ಲ ಕೀಟಳೆ ಮಾಡಿ ಗೊಳ್ಹೂಯ್ಕೊತಿದ್ರು. ಸುಧಾಕರ ಅಷ್ಟೊಂದು ದಿನಗಳ ವರೆಗೆ ಜಠಾದರಿ ಯಾಗಿದ್ದ ಹಿನ್ನೆಲೆ ಹೀಗಿದೆ. ಮೊದಲ ಮಗು ಗಂಡು ಹುಡುಗನಾದರೆ ಅವನ ಹುಟ್ಟುಕೂದಲನ್ನು ಪಳನಿಗೆ ಬಂದು ಪಳನಿಯಪ್ಪನಿಗೆ ಅರ್ಪಿಸುತೀನೆಂದು ಅವನ ಅಮ್ಮ ಹರಕೆ ಹೊತ್ತಿದ್ದರಂತೆ. ಹರಕೆ ಫಲಿಸಿತು ಮುತ್ತಿನಂತ ಗಂಡು ಮಗ ಸುಧಾಕರ ಹುಟ್ಟಿದ. ಮೊದಲ ವರ್ಷ ಮಗು ಬಹಳ ಚಿಕ್ಕದು ಹೊಗಿ ಬರೊದು ಕಷ್ಟ ಹಾಗು ಮಗು ಬೊಕ್ಕ ತಲೆಯದಾದ್ದರಿಂದ ಅವನಿಗೆ ೨ ವರ್ಷಗಳಾದಮೇಲೆ ಹೊಗೊಣ, ಕುದಲೂ ಚೆನ್ನಾಗಿ ಬಂದಿರುತ್ತದೆ ಎಂದುಕೊಂಡರಂತೆ. ಆದರೆ ಸುಧಾಕರನಿಗೆ ೨ ವರ್ಷಗಳಾಗೊದ್ರೊಳ್ಗೆ ಅವನ ತಂಗಿ ಸುಜಾತಿ ಹುಟ್ಟಿದ್ಳು, ೨ ನೇ ವರ್ಷನೂ ಹೊಗೊಲಾಗಲಿಲ್ಲ. ಮನೆಮಂದಿಯಲ್ಲಾ ಹೊಗ್ಬೆಕು ಅಂದರೆ ಹಣ ಒದಗಿ ಬರ್ಬೆಕು. ಕೆಳಮದ್ಯಮವರ್ಗದೊರ್ದೆಲ್ಲಾ ಅವತ್ತು ದುಡಿದು ಅವತ್ತು ತಿನ್ನೊ ಪರಿಸ್ಥಿತಿ, ಸುಧಾಕರನ ತಂದೆ ಬಾಡಿಗೆ ಆಟೊ ಒಡಿಸ್ತಾ ಇದ್ದು, ಆಧಾಯ ಎಲ್ಲಾಸಮಯನು ಒಂದೇತರ ಇಲ್ದಿರೊದ್ರಿಂದ ವರ್ಷಗಳು ಕಳೀತಿದ್ದು ಸುಧಾಕರನ ಕೂದ್ಲು ಬೆಳೀತಿದ್ರೂ ಪಳನಿಗೆ ಹೊಗಕ್ಕೇ ಆಗ್ಲಿಲ್ಲ. ಕಡೆಗೆ ಸುಧಾಕರ ನಾಲ್ಕ್ನೆ ತರಗತಿಲಿದ್ದಾಗ ಅವನ ಉದ್ದಕೂದಲ ಮೆಲೆ ಪಳನಿಯಪ್ಪನಿಗೆ ಕರುಣೆಬಂದೊ, ಆಸೆಬಂದೊ ಬಳಿಗೆ ಕರೆಸಿಕೊಂಡು, ತನಗೆ ಸಲ್ಲಬೆಕಾದ್ದನ್ನು ತನ್ನದಾಗಿಸಿಕೊಂಡ, ಮೊಟ್ಟೆ ತಲೆಯ ಸುಧಾಕರ ಊರಿಗೆ ಮರಳಿದ. ನಾವು ಒದುತ್ತಿದ್ದ ಸರಕಾರಿ ಶಾಲೆ ಯಲ್ಲಿ ೭ನೆ ತರಗತಿ ವರೆಗೆ ಮಾತ್ರ ಇದ್ದುದ್ದು ಅದರ ಮುಂದೆ ಓದಲು ಬೇರೆ ಶಾಲೆ ಯನ್ನು ಸೇರಬೆಕಿತ್ತು. ೭ನೆ ತರಗತಿ ನಂತರ ನನ್ನ ಹಾಗು ಸುಧಾಕರನ ಶಾಲೆಗಳು ಬೇರೆ ಬೇರೆ ಯಾದವು, ನಾನು ಅವನು ಸಂಧಿಸುವ ಅವಕಾಶ ಗಳು ತೀರ ಕಡಿಮೆಯಾದವು. ನಾನು ಅವನನ್ನು ಕಳೆದ ಬಾರಿ ಭೇಟಿ ಯಾಗಿದ್ದು ೬ ವರ್ಷಗಳ ಹಿಂದೆ, ತುಂಬ ನಿರಾಶನಾಗಿದ್ದ. ೯ ನೆ ತರಗತಿ ಯಲ್ಲಿ ಅನುತ್ತೀರ್ಣ ನಾಗಿ, ಮತ್ತೆ ಶಾಲೆ ಗೆ ಹೊಗಲು ಅವನಿಗೆ ಆಸಕ್ತಿ ಇರಲಿಲ್ಲ ಆದರೆ ಮನೆಯಲ್ಲಿ ತಂದೆ ತಾಯಿಯರ ಒತ್ತಡ, ಎಲ್ಲಾ ತಂದೆ ತಾಯಿಯರಂತೆ ಅವರಿಗೂ ಮಗ ಓದಿ ಉತ್ತಮ ಹುದ್ದೆಯನ್ನು ಅಲಂಕರಿಸಲಿ ಎಂಬ ಆಸೆ. ಮುಂದೇನು ಮಾಡಬೆಕೆಂಬುದು ತಿಳಿಯದೆ ಪರದಾಡುತ್ತಿದ್ದ. ಶಾಲೆಗೆ ಮತ್ತೆ ಹೊಗಬಾರದೆಂಬ ನಿರ್ಧಾರ ಮನದಟ್ಟು ಮಾಡಿಕೊಂಡು, ತನ್ನ ವಯಸ್ಸಿಗೆ ಮಾಡ ಬಹುದಾದ ಕೆಲಸಗಳಾದರು ಎನು ಎಂಬ ಆಲೊಚನೆಯಲ್ಲಿ ತೊಡಗಿದ್ದ.

ರೈಲು ಮುಂದಕ್ಕೆ ಸಾಗುತಿದ್ದಂತೆ ಬಾಗಿಲ ಬಳಿ ತಣ್ಣನೆಯ ಗಾಳಿ ವೇಗ ವಾಗಿ ಬರುತ್ತಿತು, ಸಕಲ ಕುಷಲೊಪಾರಿ ಗಳ ನಂತರ ಸುಧಾಕರ ಮತ್ತೆ ದೀರ್ಘ ಮೌನಿಯಾದ, ಕೆಲವು ನಿಮಿಷಗಳ ನಂತರ ಅವನ ಕೈ ಅಲುಗಿಸಿದೆ ಆಗ ಸುಧಾಕರ ತಾನು ಹೆಳ ಬೇಕಾದ್ದನೆಲ್ಲ ಮನವರಿಕೆ ಮಾಡಿಕೊಂಡವನಂತೆ, ತನ್ನ ಕತೆಯ ಹೇಳಲಾರಂಭಿಸಿದ.

೯ ನೆ ತರಗತಿ ಯಲ್ಲಿ ಅನುತೀರ್ಣ ನಾಗಿ, ಮತ್ತೆ ಮುಂದಿನ ವರ್ಷ ತಂದೆಯ ಬಲವಂತದಿಂದ ಅದೆ ತರಗತಿಗೆ ಹೊಗಲು ಶುರು ಮಾಡಿದೆ. ಕೆಲವೇ ತಿಂಗಳುಗಳಲ್ಲಿ ಅದೆ ಉಸಿರು ಕಟ್ಟುವ ಶಾಲಾ ಕೊಠಡಿ ಗಳು, ಅದೇ ಯಮ ದೂತರಂತೆ ಕಾಣುವ ಅಧ್ಯಾಪಕರು, ೨ ವರ್ಷ ಒಟ್ಟೀಗೆ ಓದಿ ಮುಂದಿನ ತರಗತಿಯಲ್ಲಿರೊ ಗೆಳೆಯರು, ಅದೆ ತಲಗೆ ಹತ್ತದಿರುವ ಗಣಿತದ ಸೂತ್ರಗಳು, ವಿಜ್ನಾನದ ಪ್ರಯೊಗ ಗಳು ಎಲ್ಲಾ ಒಟ್ಟಿಗೆ ಸೇರಿ ಜಿಗುಪ್ಸೆ ತಂದಿತು. ಮನೆಯಲ್ಲಿ ಅಪ್ಪನಿಗೆ ನನಗೆ ಶಾಲೆ ಹೊಗುವುದು ಇಷ್ಟವಿಲ್ಲವೆಂದರೆ ಕೆಳುವವರಲ್ಲ, ಅವರಿಗೆ ಅದು ಒಂದು ಘೊರ ಅಪರಾಧದಂತೆ ಕಾಣಿಸುತ್ತದೆ. ಒಂದು ದಿನ ಹೀಗೆ ಹಿಂಸೆ ತಡೆಯಲಾರದ ಮಟ್ಟವೇರಿದಾಗ ಮನೆ ಬಿಟ್ಟು ಓಡಿಬಂದೆ. ಆ ಕ್ಷಣದಲ್ಲಿ ಮುಂದೆನು ಮಾಡುವುದು ಯಂಬ ಕಿಂಚಿತ್ತು ಅರಿವಿರಲಿಲ್ಲ, ಸದ್ಯ ಈ ನರಕದಿಂದ ಪಾರಾದರೆ ಸಾಕು ಎಂಬ ಆಲೊಚನೆ ಇತ್ತು.

ಅವತ್ತಿನ ದಿನ ಶಾಲೆಗೆ ದಿನಾ ಹೊರಡುವ ಸಮಯಕಿಂತ ಸ್ವಲ್ಪ ಮುಂಚಿತವಾಗೆ ಹೊರಟೆ, ಶಾಲೆ ತಲುಪಿ ನನ್ನ ಬ್ಯಾಗನ್ನು ತರಗತಿಯಲ್ಲಿಟ್ಟು ಸೀದ ಬಸ್ ನಿಲ್ದಾಣದ ಕಡೆ ಹೆಜ್ಜೆ ಹಾಕಿದೆ. ಮನೆ ಬಿಟ್ಟು ಹೊರಟಾಗ ನನ್ನಬಳಿ ಹೆಚ್ಚು ಹಣವಿರಲಿಲ್ಲ, ನಾನೆ ಬಹುದಿನಗಳಿಂದ ಕೂಡಿಟ್ಟಿದ್ದ ಸುಮಾರು ೨೫ ರೂ ಗಳಷ್ಟು ಜೇಬಿನಲ್ಲಿದ್ದವು. ಬೆಂಗಳೂರಿನಲ್ಲೆ ಇದ್ದರೆ ಒಂದಲ್ಲಾ ಒಂದು ದಿನ ಅಪ್ಪ ಅಥವಾ ಅವರ ಆಟೊ ಚಾಲಕ ಮಿತ್ರರ ಕಣ್ಣಿಗೆ ಬೀಳುವುದು ಖಂಡಿತವೆಂದು, ಬೆಂಗಳೂರನ್ನು ಬಿಟ್ಟು ಹೋಗಬೆಕೆಂಬ ನಿರ್ಧಾರ ಮಾಡಿದ್ದೆ. ಮೊದಲು ಶಾಲೆಯ ಬಳಿಯಿಂದ ಬಸ್ ಒಂದರಲ್ಲಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದು ಮುಂದೇನು ಮಾಡಬೇಕೆಂಬುದನ್ನು ಯೊಚಿಸುತ್ತಾ ಪ್ಲಾಟ್‌ಫಾರ್ಮ್ ಕುರ್ಚಿಯೊಂದರಲ್ಲಿ ಕುಳಿತೆ. ಸುಮಾರು ೨ ಗಂಟೆಗಳವರೆಗೆ ಯೊಚಿಸಿದರು ಮುಂದೆನು ಮಾಡಬೇಕೆಂದು ದಾರಿ ತೊರಲಿಲ್ಲ. ಕಡೆಗೆ ನಾನು ಕೂತಿದ್ದ ಪ್ಲಾಟ್‌ಫಾರ್ಮ್ ಎದುರು ಮೈಸೂರಿಗೆ ಹೊಗುವ ರೈಲು ಬಂದು ನಿಂತಿತು, ನನ್ನ ಬಳಿ ಉಳಿದಿದ್ದ ಹಣ ಕೇವಲ ೨೨ ರೂ ಗಳು, ಮೈಸೂರಿಗೆ ಹೊಗಲು ಟಿಕೆಟ್ ದರ ಕೂಡ ೨೨ ರೂ ಗಳಾಗಿತ್ತು, ಫುಲ್ ಟಿಕೆಟ್ ತೆಗೆದು ಕೊಂಡರೆ ಊಟಕ್ಕೆ ಹಣ ಉಳಿಯೊಲ್ಲ ಹಾಗು ನನ್ನ ಉದ್ದ ಗಾತ್ರ ಗಳು ನನ್ನ ವಯಸ್ಸಿನ ಹುಡುಗರಿಗಿಂತ ಕಡಿಮೆ ಇದ್ದುದರಿಂದ ಹಾಲ್ಫ್ ಟಿಕೆಟ್ ಕೊಂಡು ರೈಲು ಹತ್ತಿದೆ. ರೈಲು ಚನ್ನಪಟ್ಟಣದಿಂದ ಸ್ವಲ್ಪ ಮುಂದೆಸಾಗಿತ್ತು, ನನ್ನ ದುರಾದೃಷ್ಟಕ್ಕೊ, ಅದೃಷ್ಟಕ್ಕೊ, ಟಿ ಸಿ ಎಲ್ಲರ ಟಿಕೆಟ್ಗಳನ್ನು ಪರೀಕ್ಷಿಸುತ್ತಾ ಬರುತ್ತಿದ್ದ, ನನ್ನ ಸರಧಿಬಂದಾಗ ನನ್ನ ಬಳಿಯಿದ್ದ ಅರ್ಧ ಟಿಕೆಟ್ ಅವನ ಮುಂದಕ್ಕೆ ಹಿಡಿದೆ, ಟಿ ಸಿ ನನ್ನನ್ನು ಕುಳಿತಲ್ಲೆಯೆ ತಲೆಯಿಂದ ಕಾಲಿನವರೆಗೆ ವೀಕ್ಷಿಸಿ ಅನುಮಾನದಿಂದ ಎಷ್ಟನೆ ತರಗತಿಯಲ್ಲಿ ಓದುತಿದ್ದಿಯಾ ಎಂದು ಕೆಳಿದ. ಈ ಪ್ರಶ್ನೆ/ಪರಿಸ್ಥಿತಿ ತೀರ ಅನಿರೀಕ್ಷಿತವಾಗಿದ್ದರಿಂದ ನಾನು ಸ್ವಲ್ಪ ಭಯದಿಂದ ನಡುಗುತ್ತ ೯ನೇ ತರಗತಿ ಎಂದು ಉತ್ತರಿಸಿದ್ದು ಟಿ ಸಿ ಯ ಮುಖದಲ್ಲಿ ಒಂದು ರೀತಿಯ ನಗುವುತಂದಿತು. ಟಿ ಸಿ ತನ್ನ ಅವಾಚ್ಯ ಶಬ್ದ ಕೊಶದ ಒಂದು ಸಣ್ಣ ಪರಿಚಯ ನೀಡಿ ನನ್ನನ್ನು ಮುಂದಿನ ನಿಲ್ದಾಣನಲ್ಲಿ ಇಳಿಸಲು ತನ್ನ ಜೊತೆಗೆ ಕರೆದೊಯ್ದ.

ಮದ್ದೂರ್ ರೈಲ್ವೆ ನಿಲ್ದಾಣದಲ್ಲಿ ಇಳಿದಾಗ ಮಧ್ಯಾನ್ಹ ೩ ಗಂಟೆ, ಜೇಬಿನಲ್ಲಿ ಉಳಿದಿದ್ದ ೧೧ ರೂ ಗಳಲ್ಲಿ ೩ ರೂ ಕೊಟ್ಟು ದೊಸೆ ತಿಂದು ಅಲ್ಲೆ ಮರದ ಕೆಳಗೆ ಕುಳಿತುಕೊಂಡು ಸ್ವಲ್ಪ ನಿದ್ದೆ ಮಾಡೊಣವೆಂದು ಕಣ್ಣುಮುಚ್ಚಿದೆ. ನನಗೆ ಮತ್ತೆ ಎಚ್ಚರ ವಾದದ್ದು ಮತ್ತೊಂದು ರೈಲಿನ ಆಗಮನದ ಶಬ್ದಕ್ಕೆ, ಕಣ್ಣುಗಳನ್ನೊಮ್ಮೆ ಉಜ್ಜಿ ಪ್ಲಾಟ್‌ಫಾರ್‌ಮಿನ ಗಡಿಯಾರದತ್ತ ನೊಡಿದಾಗ ಸಮಯ ೬.೩೦, ಸೂರ್ಯಾಸ್ತಮವಾಗಿ ಕತ್ತಲು ಎಲ್ಲೆಲು ಆವರಿಸುತ್ತಿತ್ತು. ದೊಸೆತಿಂದ ಅಂಗಡಿಯವನಲ್ಲಿ ಹೊಗಿ ಇಲ್ಲಿ ಮಾಡಲು ಕೆಲಸ ವೆನಾದರು ಸಿಗುತ್ತದೆಯೆ? ಎಂದು ವಿಚಾರಿಸಿದೆ, ಅದಕ್ಕವನು ಈ ಸಣ್ಣ ಊರಿನಲ್ಲಿ ಯಾವ ಉದ್ಯಮಗಳಿವೆ? ಇಲ್ಲಿನ ಜನರೇ ಕೆಲಸಕ್ಕಾಗಿ ಬೆಂಗಳೂರಿಗೆ ಹೊಗುತ್ತಾರೆ, ಯಾವುದಕ್ಕು ಸರಿಯೆ ಒಮ್ಮೆ ಈರಣ್ಣನನ್ನು ಕೆಳಿನೊಡು ಅವನು ಇನ್ನೆನು ಇಲ್ಲೆಗೆ ಬರುವ ಸಮಯವಾಯ್ತೆಂದು ಅತ್ತಿತ್ತ ಕಣ್ಣು ಹಾಯಿಸಿದ. ಈರಣ್ಣ ಸುಮಾರು ೪೫ ರಿಂದ ೫೦ ವರ್ಷಗಳ ವ್ಯಕ್ತಿ, ದೊಸೆ ಅಂಗಡಿಯವನ ಹತ್ತಿರ ಹಣಕಾಸಿನ ವ್ಯವಹಾರವನ್ನು ಮುಗಿಸಿ, ಎರಡು ದೊಡ್ಡ ಸ್ಟೀಲ್ ಬಕೆಟ್ ಹಾಗು ಒಂದು ದೊಡ್ಡ ಸ್ಟೀಲ್ ಡಬ್ಬಿ ಯನ್ನು ಹಿಡುದು ಹಿಂತಿರುಗಿದಾಗ ಅಂಗಡಿಯವನು ಎನೊ ಜ್ಞಾಪಿಸಿಕೊಂಡವನಂತೆ ನನಗೆ ಬರಮಾಡಲು ಕೈತೊರಿ ಈರಣ್ಣನ ಪರಿಚಯ ಮಾಡಿ ಕೊಟ್ಟ. ಈರಣ್ಣನಿಗೆ ನನ್ನ ಪರಿಚಯ ನೀಡಿ ಯಾವದಾದರು ಕೆಲಸ ಕೊಡಿಸುವಂತೆ ಕೆಳಿಕೊಂಡೆ ಈರಣ್ಣ ಮೊದಲು ನನಗೆ ಉಪದೇಷವನ್ನಿತ್ತು ಮನೆಗೆ ಮತ್ತೆ ಮರಳುವಂತೆ ಹೇಳಿದರು, ಆದರೆ ನನ್ನ ನಿರ್ಧಾರ ಖಚಿತವೆಂದು ಮನವರಿತ ಮೆಲೆ ನನ್ನನ್ನು ಅವರ ಜೊತೆಗೆ ಕರೆದೊಯ್ದರು.

ಈರಣ್ಣನದ್ದು ಕ್ಯಾಂಟೀನ್ ಬಿಸ್‌ನಸ್ಸು, ದೊಸೆ, ಇಡ್ಲಿ, ಮದ್ದೂರ್ ವಡೆ, ಕಾಫೀ, ಟೀ ಇದೆನೆಲ್ಲ ತಯಾರು ಮಾಡಿ ಮದ್ದೂರ್ ರೈಲ್ವೆ ನಿಲ್ದಾಣ ದಲ್ಲಿ ಹಾಗು ಇಲ್ಲಿ ಹಾದು ಹೊಗುವ ರೈಲಿನಲ್ಲಿ ಮಾರುವವರಿಗೆ ಸರಬರಾಜು ಮಾಡುವುದು. ಕಳೆದ ೨೫ ವರ್ಷಗಳಿಂದ ಈರಣ್ಣ ಈ ವ್ಯವಹಾರ ದಲ್ಲಿ ತೊಡಗಿದವನು, ಮೊದ ಮೊದಲು ತಾನು ಇತರರಿಂದ ಮದ್ದೂರ್ ವಡೆ, ಕಾಫೀ, ಟೀ ಕೊಂಡು ತಂದು ರೈಲಿನಲ್ಲಿ ಮಾರುತಿದ್ದರಂತೆ ಆದರೆ ಆರೊಗ್ಯ ಹದ ಗೆಟ್ಟು ಹೆಚ್ಚು ಓಡಾಡಲಾಗದಾಗ ತನ್ನದೆ ಒಂದು ಕ್ಯಾಂಟೀನ್ ತೆಗೆದು, ಎಲ್ಲರಿಗೂ ಸರಬರಾಜು ಮಾಡುವ ಕೆಲಸಕ್ಕಿಳಿದರಂತೆ. ಈರಣ್ಣನ ಕ್ಯಾಂಟೀನ್ ಸುಮಾರು ೧೪ * ೧೬ ಅಡಿಗಳಿರುವ ಒಂದು ಅಂಗಡಿ ಮಳಿಗೆ, ರೈಲ್ವೆ ನಿಲ್ದಾಣಕ್ಕೆ ಹತ್ತಿರವಿರುವ ಸ್ಥಳ. ಈರಣ್ಣ ನನಗೆ ಯಾವ ಕೆಲಸಗಳು ಬರುತ್ತದೆಂದು ಕೇಳಿದರು?, ಅಪ್ಪ ಇಲ್ಲದಾಗ ಒಂದೆರಡುಬಾರಿ ಕದ್ದು ಆಟೊ ಓಡಿಸಿದನ್ನು ಬಿಟ್ಟರೆ ನನಗೆ ಇನ್ನಾವ ಕೆಲಸವು ಬರುತ್ತಿರಲಿಲ್ಲ, ಆದರೆ ಮನದಲ್ಲಿ ಒಬ್ಬ ಮೆಕ್ಯನಿಕ್ ಆಗಬೇಕೆಂಬ ಹಂಬಲವಿತ್ತು ಅದನ್ನು ಈರಣ್ಣನಿಗೆ ತಿಳಿಸಿದೆ. ಈ ಸಣ್ಣ ಊರಿನಲ್ಲಿ ಹೆಚ್ಚು ವಾಹನಗಳಿಲ್ಲ ಹಾಗು ಇರುವ ಒಂದೆರಡು ಮೆಕ್ಯಾನಿಕ್ ಅಂಗಡಿಯವರೇ ನೊಣ ಓಡಿಸುತ್ತಾ ಖಾಲಿ ಕುಳಿತಿರುತ್ತಾರೆ, ನಿನಗೆ ಮೆಕ್ಯಾನಿಕ್ ಆಗ ಬೇಕಾದರೆ ಬೆಂಗಳೂರು ಅಥವ ಮೈಸೂರಿನಂತ ಪಟ್ಟಣಗಳಿಗೆ ಹೊಗಬೇಕು. ನನ್ನ ಕ್ಯಾಂಟೀನಲ್ಲಿ ಸಹಾಯಕನಾಗಿ ಕೆಲಸಮಾಡುವ ಇಚ್ಛೆ ಇದ್ದರೆ ಇಲ್ಲೆ ಕೆಲಸಮಾಡಿಕೊಂಡಿರು ಊಟ ವಸತಿ ಎರಡು ಇಲ್ಲೆ ಆಗುತ್ತದೆ, ಅದಲ್ಲದೆ ಸಂಬಳ ಅಂತ ತಿಂಗಳಿಗೆ ೩೦೦ ರೂ ಕೊಡುತ್ತೆನೆ ಇದು ನಿನಗೆ ಇಷ್ಟವಿಲ್ಲದಲ್ಲಿ ರಾತ್ರಿ ಇಲ್ಲೆ ಮಲಗಿದ್ದು ಬೆಳಗ್ಗೆ ನಿನ್ನದಾರಿಯನ್ನು ನೀ ನೊಡಿಕೊ ಎಂಬ ಸಲಹೆಯನ್ನಿತ್ತರು.

ಈರಣ್ಣನ ಕ್ಯಾಂಟೀನ್‌ನಲ್ಲಿ ನನ್ನ ಪಾಲಿಗೆಬಂದ ಕೆಲಸಗಳೆಂದರೆ ತರಕಾರಿ ಹೆಚ್ಚುವುದು, ಪಾತ್ರೆ ತೊಳೆಯುವುದು, ಮದ್ದೂರ್ ವಡೆಯನ್ನು ಎಣಿಸಿ ವಿವಿಧ ಡಬ್ಬಗಳಿಗೆ ತುಂಬುವುದು ಮತ್ತು ಅಂಗಡಿಯನ್ನು ಶುಚಿಯಾಗಿಡುವುದು. ದಿನಗಳು ಕಳದಂತೆ ಮದ್ದೂರ್ ವಡೆ, ದೊಸೆ, ಇಡ್ಲಿ, ಚಟ್ಣಿ ಪ್ರತಿ ಅಡಿಗೆಗೆ ಬೆಕಾದ ಪದರ್ತ ಗಳು ಅದು ಮಾಡುವರೀತಿ ಅದಕ್ಕೆ ಯಾವ ಯಾವ ಪದಾರ್ತ ವನ್ನು ಯಾವ ಪ್ರಮಾಣದಲ್ಲಿ ಯಾವಾಗ ಹಾಕಬೇಕು ಇದನ್ನೆಲ್ಲ ಕಲಿಯುತ್ತ ಬಂದೆ. ಕೆಲವು ದಿನಗಳು ಈರಣ್ಣನಿಗೆ ಹುಷಾರು ತಪ್ಪಿದಾಗ ಅವ ಹೇಳಿ ಕೊಟ್ಟಂತೆ ನಾನೆ ಎಲ್ಲಾ ಅಡುಗೆ ಗಳನ್ನು ಮಾಡುತ್ತಿದ್ದೆ. ತಿಂಗಳುಗಳು ಕಳದಂತೆ ಮತ್ತಷ್ಟು ಕೆಲಸಗಳು ನನ್ನದಾದವು, ಮಾಡಿರುವ ತಿಂಡಿಗಳನ್ನು ರೈಲ್ವೆ ನಿಲ್ದಾಣದ ಅಂಗಡಿಗಳಿಗೆ, ರೈಲಿನಲ್ಲಿ ಮಾರುವ ವ್ಯಾಪಾರಿಗಳಿಗೆ ಸಗಿಸು ಬರುವುದು, ರಾತ್ರಿ ಹೊಗಿ ಪಾತ್ರೆಗಳನ್ನು ಮರಳಿ ತರುವುದು, ಕೆಲವುದಿನ ವ್ಯಾಪಾರ ವಾಗದೆ ಉಳಿದ ಮದ್ದೂರ್ ವಡೆ ಗಳನ್ನು ಬೇರೆ ಇಟ್ಟು ಮರುದಿನ ಮತ್ತೆ ಅವನ್ನೆಲ್ಲ ಬಿಸಿ ಎಣ್ಣೆಯಲ್ಲಿ ಕರಿಯುವುದು ಇತ್ಯಾದಿ. ಹೊರಗಿನ ಕೆಲಸದಲ್ಲಿ ತೊಡಗಿದಂತೆ ಜನಗಳ ಸಂಪರ್ಕವು ಬೆಳೆಯುತ್ತಹೊಯ್ತು, ಅಂಗಡಿ ವಾಪರಿಗಳು, ರೈಲಿನಲ್ಲಿ ತಿಂಡಿ/ಕಾಫೀ ಮಾರುವವರು, ಕೂಲಿ ಕೆಲಸದವರು, ಹಣ್ಣು ಮಾರುವವರು ಇವರೆಲ್ಲರ ಪರಿಚಯವಾಯ್ತು. ಕೆಲವು ದಿನ ಹೆಚ್ಚಿನ ಕೆಲಸವಿಲ್ಲದಾಗ ರೈಲಿನಲ್ಲಿ ತಿಂಡಿ/ಕಾಫೀ ಮಾರುವವರ ಜೊತೆ ಮಂಡ್ಯಾದವರೆಗೆ ಹೊಗಿಬಂದದ್ದುಂಟು, ಇವರು ಮಾರುವ ವಿಧಾನ, ಒಬ್ಬೊಬರು ಮದ್ದೂರ್ ವಡೆ ಕಾಫೀ, ಟೀ ಎಂದು ಕೂಗುವ ರೀತಿ ಗಳು, ಯಾರ್ ಯಾರು ಯಾವ ಭೊಗಿ ಗಳಲ್ಲಿ ಮಾತ್ರ ಮಾರಬೇಕು ಹೀಗೆ ಈ ವ್ಯವಹಾರದ ಒಳಮರ್ಮಗಳನ್ನರಿಯುತ್ತಬಂದೆ. ಈರಣ್ಣ ಅಥವ ಅವನಂತ ತಿಂಡಿ ಮಾಡುವವರಿಂದ ಯಾವ ದರ ದಲ್ಲಿ ಕೊಳ್ಳುತ್ತಾರೆ, ರೈಲಿನಲ್ಲಿ ಜನರಿಗೆ ಯಾವದರದಲ್ಲಿ ಮಾರುತ್ತಾರೆ, ಟಿ ಸಿ ಗಳಿಗೆ ತಿಂಗಳ ಮಾಮೂಲಿ ಎಷ್ಟು ಕೊಡಬೇಕು, ವಾರದ ಯಾವ ದಿನಗಳು ಹೆಚ್ಚಿಗೆ ವ್ಯಾಪರವಗುತ್ತದೆ ಇವನ್ನೆಲ್ಲ ಗ್ರಹಿಸುತ್ತ ಬಂದೆ. ಕ್ಯಾಂಟೀನ್ ನಲ್ಲಿ ಕೂತು ಕೆಲಸ ಮಾಡುವುದಕ್ಕಿಂತ ರೈಲಿನಲ್ಲಿ ಮಾರುವುದು ಹೆಚ್ಚು ರೊಮಾಂಚಕಾರಿ ಹಾಗು ಲಾಭದಾಯಕ ಕೆಲಸವೆನ್ನಿಸಿತು.

ಸುಮಾರು ೨ ವರ್ಷಗಳಷ್ಟು ಕಾಲ ಈರಣ್ಣನ ಕ್ಯಾಂಟೀನ್‌ನಲ್ಲಿ ದುಡಿದಮೆಲೆ, ನಾನು ರೈಲಿನಲ್ಲಿ ತಿಂಡಿ/ಕಾಫೀ ಮಾರುವ ಈ ಕೆಲಸಲ್ಲೆ ಬಂದೆ. ಈರಣ್ಣನಿಂದ ಮದ್ಡೂರ್ ವಡೆ, ಕಾಫೀ, ಟೀ ಇವನ್ನೆಲ್ಲಾ ತಂದು ಇಲ್ಲಿ ಮಾರುವುದುಂಟು, ಒಂದು ವಡೆ ೧ ರೂ ಹಾಗು ಕಾಫೀ/ಟೀ ಗೆ ೧ ರೂ ೫೦ ಪೈಸೆ ಎಷ್ಟು ಲಾಭವಿದೆ. ಹೆಚ್ಚಿಗೆ ಮಾರಿದಷ್ಟು ಹೆಚ್ಚು ಹಣಗಳಿಕೆ, ಬೆಳಿಗ್ಗೆ ಸುಮಾರು ೬.೦೦ ರಿಂದ ರಾತ್ರಿ ೧೦ ತನಕ ಮಾರುತ್ತೆನೆ, ನಡುವೆ ರೈಲು ಇಲ್ಲದಿದ್ದಾಗ ನನ್ನ ವಿಶ್ರಾಂತಿ. ಈರಣ್ಣನಿಗೆ ಹುಷಾರಿಲ್ಲದಾಗ ಈಗಲು ಅವನಿಗೆ ಸಹಾಯ ಮಾಡುವುದುಂಟು.

ಸುಧಾಕರ ಇಷ್ಟು ಹೆಳುವಷ್ಟರಲ್ಲಿ ರೈಲು ಮದ್ದೂರನ್ನು ಹಾದು ಚನ್ನಪಟ್ಟಣ್ಣದಲ್ಲಿ ಬಂದು ನಿಂತಿತು. ನನ್ನ ರೈಲ್ವೆ ಪಾಸ್ ಇರುವುದು ಚನ್ನಪಟ್ಟಣ್ಣದ ವರೆಗೆ ಮಾತ್ರ ನಾನು ಇಲ್ಲೆ ಇಳಿಯ ಬೇಕೆಂದು ಸುಧಾಕರ ನನಗೆ ವಿಧಾಯ ಹೇಳಿದ.

2 comments:

Santosh Rao said...

ಸೊಲ್ಪ ತಡವಾಯ್ತು.. ಇವೆಲ್ಲವನ್ನೂ ಸಲಹೆ ಕೊಡೊಕೆ..
ಸಲಹೆಗಿನ್ನ ನನ್ನ ಅನಿಸಿಕೆಗಳು.
- ಕಥೆಯ ಪೂರ್ವಭಾಗ ತುಂಬಾ ಚೆನ್ನಗಿ ಮೂಡಿ ಬಂದಿದೆ. humorous ಅನ್ನೋದು ಚೆನ್ನಗಿದೆ.
- ಮದ್ದೂರು ವಡೆಯ ಬಣ್ನನೆ ತುಂಬಾ ಚೆನ್ನಾಗಿ ಬಂದಿದೆ, ನನ್ನಬಾಯಲ್ಲು ನೀರು ಬಂತು.
- ಸುಧಾಕರನ ಕಥೆ , ನನ್ನ ಗಮನವನ್ನ ಹಿದಿದು ನಿಲ್ಲಿಸಲಿಲ್ಲ. ಕಥೆಯ ಆ houmar ಏಲ್ಲೊ ಕಳೆದು ಹೋಗಿದೆ. ಯಾವ ಭಾವೊದ್ವೀಗವೂ ಇಲ್ಲದಿರೊದರಿಂದ , ತುಂಬ ಗಮನವಾನು ಹಿಡಿದು ನಿಲ್ಲಿಸೋಲ್ಲ.
- ಕೆಲವು ವ್ಯಾಕರಣ ತಪ್ಪುಗಳು, ಇದು ಅಸ್ಟೊಂದು ಪ್ರಾಮುಖ್ಯವಲ್ಲ, ಎಕೇಂದರ, ಕನ್ನಡದಲ್ಲಿ Computerನಲ್ಲಿ ಕುಟ್ತುವಾಗ ಆಗುವಂತ ಸಾಮಾನ್ಯ ತಪ್ಪುಗಳು. ವಿಪರ್ಯಸ, ರುಪಾಯಿ ಗಳಿದ್ದವು (ಪದ ಓಂದೆ), ಹಶಿಯೊಕ್ಕೆ (ಆಡು ಭಾಷೀಲಿ ಸರಿ ), ಜಠಾದರಿ ,

Sushrutha Dodderi said...

ಕಿರಣ್,
ನಮಸ್ಕಾರ. ಹೇಗಿದ್ದೀರಿ?

ನಿಮಗೆ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ’ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ’ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ’ಸಂಪದ’ದ ಹರಿಪ್ರಸಾದ್ ನಾಡಿಗ್, ’ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ’ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ